Connect with us

Politics

ಹಿಂದುತ್ವದ ಭದ್ರಕೋಟೆಯಲ್ಲಿ ಹಾರಿದ ಕಾಂಗ್ರೆಸ್ ಬಾವುಟ: ವಿಶ್ಲೇಷಣೆ ಡಾ.ಸುಬ್ರಹ್ಮಣ್ಯ ಭಟ್ ಬೈಂದೂರು

Published

on

ಹಿಂದುತ್ವದ ಭದ್ರಕೋಟೆಯಲ್ಲಿ ಹಾರಿದ ಕಾಂಗ್ರೆಸ್ ಬಾವುಟ..!

ಕರಾವಳಿಯಲ್ಲಿ ಕಳೆದೆರಡು ದಶಕಗಳಲ್ಲಿ ಹಿಂದುತ್ವದ ಕಿಚ್ಚು ದಿನದಿಂದ ದಿನಕ್ಕೆ ಹೆಚ್ಚೆಚ್ಚು ಹಬ್ಬುತ್ತಿರುವುದು ಎಲ್ಲರಿಗೂ ತಿಳಿದ ಸಂಗತಿ. ಗ್ರಾಮ ಪಂಚಾಯತ್ ನಿಂದ ಹಿಡಿದು ಲೋಕಸಭೆಯ ವರೆಗೆ ನಿರಾಯಾಸವಾಗಿ ಕಮಲ ಅರಳುತ್ತದೆ ಎನ್ನುವಂತಹ ಸ್ಥಿತಿ ಈ ಭಾಗದಲ್ಲಿದೆ. ಆದರೆ ನಿನ್ನೆ ಕುಂದಾಪುರ ತಾಲೂಕಿನ ಗಂಗೊಳ್ಳಿ ಗ್ರಾಮ ಪಂಚಾಯತ್ ನ ಚುನಾವಣಾ ಫಲಿತಾಂಶ ಕಾಂಗ್ರೆಸ್ ಗೆ ಅಚ್ಚರಿ ಮೂಡಿಸಿದ್ದರೆ, ಬಿಜೆಪಿಗೆ ಮರ್ಮಾಘಾತ ನೀಡಿದೆ. ಹೌದು ಗಂಗೊಳ್ಳಿ ಅತೀ ಸೂಕ್ಷ್ಮ ಪ್ರದೇಶ, ಇಲ್ಲಿರುವಷ್ಟು ಹಿಂದುತ್ವದ ಅಲೆ ಬಹುಶ: ಮತ್ತೆಲ್ಲೂ ಇರಲಿಕ್ಕಿಲ್ಲ…! ಬಿಜೆಪಿ ಸರಕಾರವಿರಲಿ, ಕಾಂಗ್ರೆಸ್ ಸರಕಾರವಿರಲಿ ಗಂಗೊಳ್ಳಿಯಲ್ಲಿ ವರ್ಷಕ್ಕೆ ಒಂದೆರಡು ಗಲಭೆ, ಪ್ರತಿಭಟನೆ ಸರ್ವೇ ಸಾಮಾನ್ಯ ಎಂಬಂತಿತ್ತು…!

ಅಣ್ಣಾಮಲೈ ಡಿಎಸ್ ಪಿ ಆಗಿದ್ದಾಗ ಹಿಂದೂ ಕಾರ್ಯಕರ್ತರನ್ನು ಎಳೆದೊಯ್ದರೆಂಬ ಕಾರಣಕ್ಕೆ ಇಲ್ಲಿಯ ಜನ ಗಂಗೊಳ್ಳಿ ಠಾಣೆಗೆ ಮುತ್ತಿಗೆ ಹಾಕಿ ನಾಲ್ಕಾರು ತಾಸು ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಿದ್ದರಿಂದ ಹಿಡಿದು, ಒಂದು ಧರ್ಮದ ವ್ಯಾಪಾರಿಗಳಿಗೆ ಮೀನು ಮಾರಾಟ ಮಾಡದೆ ಇರುವುದು, ದನದ ಮಾಂಸ ಮಾರಾಟದ ವಿರುದ್ದ ಹೋರಾಟ, ಲಾಠಿ ಚಾರ್ಜ…. ಹೀಗೆ ಸದಾ ಸುದ್ದಿಯಲ್ಲಿರುವ ಗ್ರಾಮ ಇದು…! ಇದನ್ನೇ ಬಂಡವಾಳ ಮಾಡಿಕೊಂಡಿರುವ ಬಿಜೆಪಿ ಜನರ ಮಧ್ಯೆ ಬಿರುಕು ಮೂಡಿಸಿ ಕಳೆದ ಮೂರು ಅವಧಿಗಳಲ್ಲಿ ಪಂಚಾಯತ್ ಅನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡಿತ್ತು…! ಆದರೆ ಆ ಹಿಡಿತ ಈ ಬಾರಿ ಸಡಿಲವಾಗಿ ಪಂಚಾಯತ್ ಕಾಂಗ್ರೆಸ್ ಮೈತ್ರಿಯ ತೆಕ್ಕೆಗೆ ಬಂದಿರುವುದು ವಿಶೇಷ…!

ಇತ್ತೀಚೆಗೆ ಒಂದು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ಓರ್ವ ಬಿಜೆಪಿ ಮುಖಂಡರು ನಮ್ಮ ಕರಾವಳಿಯವರಿಗೆ ಬಿಟ್ಟಿ ಭಾಗ್ಯ ಬೇಡ ಎಂದಿದ್ದರು. ಆದರೆ ಗಂಗೊಳ್ಳಿಯ ಫಲಿತಾಂಶ ಕಾಂಗ್ರೆಸ್ ಸರಕಾರ ನೀಡುತ್ತಿರುವ ಐದು ಗ್ಯಾರಂಟಿಯನ್ನು ಜನ ಒಪ್ಪಿದ್ದಾರೆ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಪಡಿಸಿದೆ. ಇದರ ಜೊತೆಗೆ ಬಿಜೆಪಿ ಜನರ ನಡುವೆ ಕಂದಕ ನಿರ್ಮಿಸಿ, ಒಂದೇ ಊರಿನವರು ಶತ್ರುಗಳಂತೆ ಧರ್ಮದ ಹೆಸರಿನಲ್ಲಿ ಹೊಡೆದಾಡುವಂತೆ ಮಾಡಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಎನ್ನುವ ವಾಸ್ತವ ಜನಸಾಮಾನ್ಯರಿಗೆ ಅರ್ಥವಾದಂತಿದೆ.

ಮಾಜಿ ಶಾಸಕರಾದ ಗೋಪಾಲ ಪೂಜಾರಿಯವರು ತಮ್ಮ ರಾಜಕೀಯ ಜೀವನದಲ್ಲಿ ಎಲ್ಲಾ ಜಾತಿ, ಧರ್ಮದವರನ್ನು ಒಟ್ಟಿಗೆ ತೆಗೆದುಕೊಂಡು ಹೋದವರು. ಆದರೆ ಅವರು ಮುಸ್ಲಿಂ ಬಾಂಧವರೊಂದಿಗೆ ಮಾತನಾಡುತ್ತಿರುವ ಪೊಟೊ ಸಾಮಾಜಿಕ ಜಾಲತಾಣದಲ್ಲಿ ಹಾಕಿ, ಬಿಜೆಪಿಯವರು ಅಪಪ್ರಚಾರ ಮಾಡಿ ಅದರಿಂದ ಲಾಭ ಮಾಡಿಕೊಳ್ಳಲು ಪ್ರಯತ್ನಿಸುತ್ತಲೇ ಬಂದಿದ್ದಾರೆ. ಆದರೆ ಅಧಿಕಾರ ಇರಲಿ, ಇಲ್ಲದಿರಲಿ ಸದಾ ಜನರ ನಡುವೆ ಇರುವ ಗೋಪಾಲ ಪೂಜಾರಿಯವರ ಪ್ರಾಮಾಣಿಕತೆಯನ್ನು ಈ ಬಾರಿ ಗಂಗೊಳ್ಳಿಯ ಜನ ಗೌರವಿಸಿದ್ದಾರೆ. ಹಾಗಾಗಿ ಒಟ್ಟು 33 ಸ್ಥಾನಗಳಿರುವ ಗಂಗೊಳ್ಳಿ ಗ್ರಾಮಪಂಚಾಯತ್ ನಲ್ಲಿ ಕಾಂಗ್ರೆಸ್ ಬೆಂಬಲಿತ 12, SDPI ಬೆಂಬಲಿತ 7, ಬಿಜೆಪಿ ಬೆಂಬಲಿತ 12 ಹಾಗೂ ಇತರರು 2 ಸ್ಥಾನಗಳಲ್ಲಿ ಜಯ ಗಳಿಸಿದ್ದಾರೆ. ಕಾಂಗ್ರೆಸ್ ಮತ್ತು SDPI ಚುನಾವಣಾ ಪೂರ್ವ ಮೈತ್ರಿಯಿಂದ ಕಾಂಗ್ರೆಸ್ ಪಂಚಾಯತ್ ನಲ್ಲಿ ಅಧಿಕಾರ ಹಿಡಿಯಲಿದೆ.

ಈ ಫಲಿತಾಂಶದಿಂದ ಬಿಜೆಪಿ ದೊಡ್ಡ ಪಾಠ ಕಲಿಯಬೇಕಿದೆ. ಹಿರಿಯ ಕಾರ್ಯಕರ್ತರನ್ನು ಮೂಲೆಗುಂಪು ಮಾಡಿ, ಅನುಭವ ಇರದ ಯುವಕರನ್ನು ಮುನ್ನೆಲೆಗೆ ತಂದು, ಸಾಮಾಜಿಕ ಜಾಲತಾಣ, ವಾಟ್ಸ್ಯಾಪ್ ಯುನಿವರ್ಸಿಟಿಯನ್ನು ಅತಿಯಾಗಿ ನೆಚ್ಚಿಕೊಂಡಿದ್ದರ ಪರಿಣಾಮವಾಗಿ ಬಿಜೆಪಿ ಜನರ ವಿಶ್ವಾಸವನ್ನು ಕಳೆದುಕೊಳ್ಳುತ್ತಿದೆ. ಹಿಂದುತ್ವದ ಅಮಲಿನಿಂದ ತಮ್ಮ ಕಷ್ಟ ಬಗೆಹರಿಯುವುದಿಲ್ಲ, ಬದಲಾಗಿ ಕಾಂಗ್ರೆಸ್ ನೀಡಿರುವ ಪಂಚ ಗ್ಯಾರಂಟಿ ತಮಗೆ ಕೊಂಚ ಸಾಂತ್ವನ ನೀಡುತ್ತಿದೆ ಎನ್ನುವ ಅರಿವು ಪ್ರಜ್ಞಾವಂತ ಮತದಾರರಿಗೆ ಇದೆ. ಹಾಗಾಗಿ ಕಾಂಗ್ರೆಸ್ ಮೈತ್ರಿಗೆ ಜೈ ಎಂದಿದ್ದಾರೆ. ಈ ಪರಿವರ್ತನೆ ಮುಂದಿನ ದಿನಗಳಲ್ಲಿ ಕರಾವಳಿಯಾದ್ಯಂತ ನಡೆಯುವ ಸಾಧ್ಯತೆ ಇದೆ…

ಡಾ.ಸುಬ್ರಹ್ಮಣ್ಯ ಭಟ್, ಬೈಂದೂರು.

Advertisement

Trending